ತುಳುನಾಡು ಒಂದು ಕಾಲದಲ್ಲಿ ಜೈನ ಬಂಧುಗಳಿಂದಲೇ ತುಂಬಿಹೋಗಿತ್ತು. ನೂರಾರು ಎಕರೆ ಭೂಮಾಲಕರುಗಳಾಗಿ ಬಸದಿಗಳನ್ನು , ದೇವಸ್ಥಾನಗಳನ್ನು , ದೈವಾಲಯ, ನಾಗಾಲಯಗಳ ನಿರ್ಮಾಣ ಮಾಡಿ ಭವ್ಯ ಪರಂಪರೆಯ ಹರಿಕಾರರಾಗಿ ಜೈನರು ಧಾರ್ಮಿಕ , ಸಾಮಾಜಿಕ ಪರಂಪರೆಗೆ ಅಭೂತಪೂರ್ವ ಕಾಣಿಕೆ ನೀಡಿದ್ದಾರೆ. ಭೂಮಂಡಲದಲ್ಲೇ ಅತಿಶಯವೆನಿಪ ತುಳುನಾಡಿನ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕ ಪರಂಪರೆಗಳಿಗೆ ಜೈನರಸರು ನೀಡಿದ ಕೊಡುಗೆ ಅಸದೃಶವಾಗಿದೆ. ಸಮನ್ವತೆಯ ಹರಿಕಾರರಾಗಿ ಧರ್ಮ ಸೌರಭವನ್ನು ತುಳುನಾಡಿನ ಮೂಲ ಮಣ್ಣಿನಲ್ಲಿ ಬೆರೆಸಿ ಕೋಮು ಸಾಮರಸ್ಯದ ಸೊಬಗನ್ನು ವಿಶ್ವದಾದ್ಯಂತ ಪಸರಿಸಿದವರು ಜೈನ ಅರಸರರೇ ಆಗಿದ್ದಾರೆ. ರಾಣಿ ಅಬ್ಬಕ್ಕ, ರಾಣಿ ಚೆನ್ನಾಭೈರಾದೇವಿ, ಬಂಗರಸರು, ಚೌಟರು, ಅಜಿಲರು, ಭೈರವರಸರು ಈ ತುಳುನಾಡಿಗೆ ನೀಡಿದ ಕೊಡುಗೆ ಶತಶತಮಾನ ಕಳೆದರೂ ಘಮಲನ್ನು ಈಗಲೂ ದಶದಿಕ್ಕುಗಳಿಗೂ ಪಸರಿಸುತ್ತಿದೆ ಹಾಗೂ ಚಿರಸ್ಥಾಯಿಯಾಗಿದೆ. ಈ ನಿಟ್ಟಿನಲ್ಲಿ ಈ ತುಳುನಾಡು ಜೈನರಸರಿಗೆ ಋಣಿಯಾಗಿದೆ.

ತುಳುನಾಡಿನಲ್ಲಿ ಜೈನ ಸಂಖ್ಯೆ ಪ್ರಾಬಲ್ಯದ ಕಡೆಯಲ್ಲಿ ಜೈನ ಎಂಬ ಪದವನ್ನು ಸೇರಿಸಿಯೇ ಜೈನ ಪೇಟೆ, ಜೈನ ಬೀದಿ, ಜೈನ ಕೇರಿ, ಜೈನ ಪಟ್ಟಣ, ಜೈನ ಗ್ರಾಮ ಎಂಬ ನಾಮದ ಹಲವು ಊರುಗಳು ತುಳುನಾಡಿನಲ್ಲಿ ಇಂದಿಗೂ ಇದೆ. ಹಲವು ಕಡೆಗಳಲ್ಲಿ ಜೈನರ ಪ್ರಾಬಲ್ಯ ಕಡಿಮೆಯಾದಂತೆ ಜೈನರ ಹೆಸರಿನ ಊರುಗಳ ಹೆಸರುಗಳೂ ಕೂಡ ಬದಲಾದವು, ಕೆಲವು ಉಳಿದುಕೊಂಡಿವೆ.

ಹಚ್ಚ ಹಸುರಿನ ಕಾನನದ ಮಧ್ಯೆ ವಿಟ್ಲ ಎಂಬ ಊರು ಜಗತ್ತಿನ ಆಗುಹೋಗುಗಳಿಗೆ ಸಾಕ್ಷಿಯಾಗಿ ನಿಂತಿದೆ. ಒಂದು ಕಾಲದಲ್ಲಿ ಜೈನರಸರ ಆಳ್ವಿಕೆ ಒಳಪಟ್ಟ ವಿಟ್ಲವು ಜೈನರೇ ಅಧಿಕವಾಗಿ ಇದ್ದ ಕಾಲ ಒಂದಿತ್ತು. ಆಗಿನ ಸಮಯದಲ್ಲಿ ಜೈನ್ ಪೇಟೆ ಎಂಬ ಊರಲ್ಲಿ ಭವ್ಯವಾದ ಜೈನರ ಬಸದಿಯೊಂದು ಶ್ರಾವಕರ ಪೂಜೆ ಪುನಸ್ಕಾರಗಳಿಂದ ರತ್ನತ್ರಯದ ಸಂದೇಶವನ್ನು ಸಾರುತ್ತಾ ಇತ್ತು.

ಕಾಲಚಕ್ರ ಉರುಳಿದಂತೆ ಜೈನರಸರ ಆಳ್ವಿಕೆ ಕೊನೆಗೊಂಡಿತು. ಪರಕೀಯರ ಗುಲಾಮತನದ ಆಡಳಿತ ಜಾರಿಗೊಂಡಿತು. ಆದರೂ ಆ ಕಾಲಚಕ್ರದ ಹೊಡೆತಕ್ಕೆ ನಲುಗದೇ ಮುನ್ನುಗ್ಗಿದರು. ಬ್ರಿಟಿಷರ ನಿರಂಕುಶ ಆಡಳಿತದ ಕಾರ್ಮೋಡ ಇದ್ದರೂ ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿಗಳಾದ ಮಂಜಯ್ಯ ಹೆಗ್ಗಡೆಯವರು ಹಾಗೂ ಇವರ ಸಹೋದರ ಪುಟ್ಟಸ್ವಾಮಿಯವರು ಜೊತೆ ಸೇರಿ 1940 ರಲ್ಲಿ ಹಳೆಯ ಬಸದಿಯನ್ನ ಭವ್ಯವಾಗಿ , ದೊಡ್ಡದಾಗಿ ಮರು ನಿರ್ಮಸಿ ಐತಿಹಾಸಿಕ ಪಂಚಕಲ್ಯಾಣ ನೆರವೇರಿಸಿದರು.

ಕಾಲಗತಿಸಿದಂತೆ ನೂರಾರು ಎಕರೆಗಳಷ್ಟು ಭೂಮಾಲಿಕತ್ವವನ್ನು ಹೊಂದಿದ್ದ ಜೈನರು ಭೂಮಸೂದೆ ಕಾನೂನಿನಲ್ಲಿ ಭೂಮಿಗಳನ್ನು ಕಳೆದುಕೊಂಡು ಅಕ್ಷರಶಃ ನಿರ್ಗತಿಕರಾದರು. ಜೈನರ ಸಂಖ್ಯೆ ಇಳಿಮುಖವಾಯಿತು. ಬಸದಿಗಳ ಸಾವಿರಾರು ಎಕರೆ ಭೂಮಿ ಅನ್ಯರ ಪಾಲಾಯಿತು. ಇಂದು ವಿಟ್ಲದ ಜೈನ್ ಪೇಟೆಯಲ್ಲಿ ಒಂದೇ ಒಂದು ಜೈನ ಕುಟುಂಬ ಇಲ್ಲದಿರುವುದು ವಿಪರ್ಯಾಸವೇ ಸರಿ.

ಅಂದು ಬಸದಿಯನ್ನು ಪುನರುತ್ಥಾನಗೊಳಿಸಿದವರಲ್ಲಿ ಓರ್ವರಾದ ಪುಟ್ಟಸ್ವಾಮಿಯ ಸುಪುತ್ರ ಡಿ. ವಿನಯಕುಮಾರ್ ಅವರು ಇಂದು ವಿಟ್ಲದ ಬಸದಿಯ ಅನುವಂಶಿಕ ಆಡಳಿತ ಮೊಕ್ತೇಸರರಾಗಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳ ಗೌರವಾಧ್ಯಕ್ಷತೆಯಲ್ಲಿ ಡಿ. ವಿನಯ್ ಕುಮಾರ್ ಇವರ ಸುಪುತ್ರ ಜಿತೇಶ್ ಎಂ ಇವರ ಅಧ್ಯಕ್ಷತೆಯಲ್ಲಿ ಹಾಗೂ ಊರಪರವೂರ ಬಂಧುಗಳ ಸಹಕಾರದೊಂದಿಗೆ ವಿಟ್ಲದ ಭಗವಾನ್ ಚಂದ್ರನಾಥ ಸ್ವಾಮಿಯ ಬಸದಿ ಸಂಪೂರ್ಣ ಶಿಲಾಮಯ ರೂಪದಲ್ಲಿ ಮರುನಿರ್ಮಾಣಗೊಂಡು ವೈಭವದ ಪಂಚಕಲ್ಯಾಣಕ್ಕೆ ಅಣಿಯಾಗಿದೆ. ಇಲ್ಲಿ ಭಗವಾನ್ ಚಂದ್ರನಾಥ ಸ್ವಾಮಿ, ಭಗವಾನ್ ಮಹಾವೀರ ಸ್ವಾಮಿ, ದೇವಿ ಪದುಮಾಂಬೆ, ದೇವಿ ಜ್ವಾಲಾಮಾಲಿನಿ ಪೂಜೆಗೊಳ್ಳುತ್ತಿದ್ದಾರೆ.

ವೈಭವದ ಪಂಚಕಲ್ಯಾಣವು 13.02.2025 ರಿಂದ 17.02.2025 ರವರೆಗೆ ಮೂಡುಬಿದಿರೆ ಜೈನ ಮಠದ ಪೂಜ್ಯ ಸ್ವಾಮೀಜಿಯವರ ಪಾವನ ಸಾನ್ನಿಧ್ಯ , ಮಾರ್ಗದರ್ಶನದೊಂದಿಗೆ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳ ನೇತೃತ್ವದಲ್ಲಿ, ಜಯಶ್ರೀ ಡಿ ಜೈನ್ ಅವರ ಭಕ್ತಿ ಸಂಗೀತದೊಂದಿಗೆ ವೈಭವವಾಗಿ ನಡೆಯಲಿದೆ.

ಬಸದಿಗೆ ಧನಸಹಾಯ ಮಾಡಬಹುದು

BANK: CANARA BANK
NAME: SHREE CHANDRANATHA DEVARA BASADI TRUST
A / c No.: 0631101136681
IFSC: CNRB0000631
BRANCH: GANDHINAGAR, MANGALORE